Sunday, May 19, 2019

ಬರೂರು ಗ್ರಾಮದಲ್ಲಿನ ಪ್ರಾಚೀನ ಶಿಲ್ಪಗಳು
- ಡಾ. ರಘುಶಂಖ ಭಾತಂಬ್ರಾ

ಬೀದರನಿಂದ 30 ಕಿ.ಮೀ. ದೂರದಲ್ಲಿರುವ ಬರೂರು ಗ್ರಾಮವು ಬೀದರ ಲೋಕಸಭಾ ಕ್ಷೇತ್ರ, ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ. ಗ್ರಾಮ ಪಂಚಾಯತ ಕಟ್ಟಡ ಹೊಂದಿದೆ. ಸದರೀ ಪಂಚಾಯತ್ ಒಂಬತ್ತು ಜನ ಸದಸ್ಯರನ್ನು ಹೊಂದಿದೆ. ಭೌಗೋಳಿಕವಾಗಿ ಕೆಂಪುಮಿಶ್ರಿತ ಬಿಳಿಮಣ್ಣು ಹೊಂದಿರುವ ಗ್ರಾಮವು 1466 ಹೆಕ್ಟೇ
ರ್‍ಗಳಷ್ಟು ವಿಸ್ತೀರ್ಣತೆ ಹೊಂದಿದೆ. ಬರೂರುದಿಂದ ಒಂದು ಕಿಲೋಮೀಟರ್ ದಾಟಿದರೆ ತೆಲಂಗಾಣ ವ್ಯಾಪ್ತಿ ಪ್ರಾರಂಭವಾಗುತ್ತದೆ.
“ವರಾಹ+ಪುರ>ಬರವುರ(ಪ್ರಾ)>ಬರೂರು(ಕ) ಪ್ರಸ್ತುತ ಗ್ರಾಮವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಇಲ್ಲಿಯ ಕಲ್ಯಾಣಚಾಲುಕ್ಯ ಕಾಲದ ಶಾಸನಗಳಲ್ಲಿ ಇದರ ಹೆಸರನ್ನು ಬರವೂರು ಎಂದು ಕನ್ನಡಕ್ಕೆ ಅತಿಶಿಷ್ಟೀಕರಣಗೊಳಿಸಿರುವುದು ಕಂಡುಬರುತ್ತದೆ. ವಿಷ್ಣುವಿನ ದಶಾವತಾರಗಳಲ್ಲೊಂದಾದ ‘ವರಾಹ’ ಎನ್ನುವ ವೈಷ್ಣವ ಧಾರ್ಮಿಕ ಹೆಸರನ್ನು ಈ ಗ್ರಾಮವು ಹೊಂದಿದೆ. ಪ್ರಸ್ತುತ ಬರೂರು ಕೂಡ ಮೊದಲು ಕಾಡುಹಂದಿಗಳ ನೆಲೆಯನ್ನು ಸೂಚಿಸುವ ದ್ರಾವಿಡ ಪ್ರಾಕೃತಿಕ ಹೆಸರನ್ನೇನಾದರೂ ಹೊಂದಿರಬಹುದೆ ಎನ್ನುವ ಬಗ್ಗೆ ಶೋಧನೆ ಮಾಡಬಹುದಾಗಿದೆ” ಎಂದು ಡಾ. ವ್ಹಿ.ಜಿ. ಭಂಡೆಯವರು ಅಭಿಪ್ರಾಯಪಡುತ್ತಾರೆ. (ಬೀದರ ಜಿಲ್ಲೆಯ ಸ್ಥಳನಾಮಗಳು, ಅಪ್ರಕಟಿತ ಸಂಶೋಧನ ಪ್ರಬಂಧ)
2011ರ ಜನಗಣತಿ ಪ್ರಕಾರ 4294 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ರೆಡ್ಡಿ, ಕುಂಬಾರ, ಲಿಂಗಾಯತ ಸೇರಿದಂತೆ ಹಲವಾರು ಜಾತಿ ಜನಾಂಗದವರು ವಾಸಿಸುತ್ತಿದ್ದಾರೆ. ಎಲ್ಲಮ್ಮದೇವಿ, ಪೋಚಮ್ಮ ದೇವಿ, ಹನುಮಾನ ಮಂದಿರ, ಶಿವಮಂದಿರ, ವೀರಭದ್ರ ದೇವಾಲಯಗಳಿವೆ. ಇಲ್ಲಿಯವರು ಕನ್ನಡ, ಹಿಂದಿ, ತೆಲುಗು ಭಾಷೆಯಲ್ಲಿ ಮಾತನಾಡುತ್ತಾರೆ. ಸಾಕ್ಷರತೆ ಪ್ರಮಾಣ ಶೇ. 33ರಷ್ಟಿದೆ. ಕನ್ನಡ, ಉರ್ದು ಮಾಧ್ಯಮದ ಪ್ರಾಥಮಿಕ ಶಾಲೆಗಳಿವೆ. ಅಂಚೆ ಕಚೇರಿ, ಕೃಷಿ ಬ್ಯಾಂಕ್, ಹಾಲು ಉತ್ಪಾದಕರ ಸಂಘ, ಹಲವಾರು ಸ್ತ್ರೀಶಕ್ತಿ ಸಂಘ, ಯುವಕ ಸಂಘಗಳಿವೆ.
ಸೂರ್ಯ ದೇವಾಲಯ, ಶಾಂತಿನಾಥ ಜಿನಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿರುವ 6ನೇ ವಿಕ್ರಮಾದಿತ್ಯನ ಕಾಲದ ಕ್ರಿ.ಶ. 1113, 1115ರ ಎರಡು ಶಾಸನಗಳಿವೆ. ಇವೆರಡು ಶಾಸನಗಳು ಬರೂರು ಗಾವುಂಡನಾಗಿದ್ದ ಆದಿತ್ಯಭಟ್ಟನ ವಂಶಾವಳಿ, ದತ್ತಿಯ ವಿವರ, ಅಟ್ಟಳೆನಾಡಿನ ವ್ಯಾಪ್ತಿ, ಯಾವ ವಸ್ತುಗಳ ಮೇಲೆ ಎಷ್ಟೆಷ್ಟು ಸುಂಕ ವಿಧಿಸಬೇಕು, ಶಾಪಾಶಯ ಇತ್ಯಾದಿ ವಿವರಗಳನ್ನು ತಿಳಿಸುತ್ತವೆ. ಶಾಸನಗಳ ಪಕ್ಕದಲ್ಲಿ ತುಂಡಾದ ಮಕರತೋರಣ ಶಿಲ್ಪವಿದೆ. ಇದನ್ನು ಬೇವಿನಮರದ ಕಟ್ಟೆಯ ಮೇಲಿಡಲಾಗಿದೆ. ಎಲ್ಲಮ್ಮದೇವಿ ದೇವಾಲಯವು ವಿಸ್ತಾರವಾದ ಆವರಣದಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯದ ಬಲಭಾಗದಲ್ಲಿ ಹಲವಾರು ಶಿಲ್ಪಗಳಿವೆ. ಅವುಗಳಲ್ಲಿ ಮುಖ್ಯವಾಗಿ ಎರಡು ಚಾಮರಧರ ಶಿಲ್ಪಗಳು, ನಾಗಶಿಲ್ಪಗಳು, ಒಂದು ಬೋದಿಗೆ ಕಲ್ಲುಗಳಿವೆ. ರಾಮ ಮಂದಿರ ಎಂದು ಹೇಳಲಾಗುವ ಚಿಕ್ಕ ದೇವಾಲಯದಲ್ಲಿ ನಾಲ್ಕು ಬೃಹತ್ ಸ್ಥಾವರಲಿಂಗಗಳು, ಎರಡು ನಂದಿಯ ವಿಗ್ರಹಗಳಿವೆ. ಇವುಗಳ ಜೊತೆಗೆ ಗ್ರಾಮದ ಅಲ್ಲಲ್ಲಿ ಹಲವಾರು ನಾಗಶಿಲ್ಪಗಳು, ಯೋಧರ ಶಿಲ್ಪಗಳಿವೆ. ಚಿಕ್ಕದಾದ ವೀರಭದ್ರನ ದೇವಾಲಯದಲ್ಲಿ ಸುಂದರವಾದ ಪ್ರಾಚೀನ ಕಾಲದ ವೀರಭದ್ರನ ಶಿಲ್ಪ ಹಾಗೂ ಶೈವಯತಿಯ ಚಿಕ್ಕಶಿಲ್ಪವಿದೆ. ನಿಜಾಮುದ್ದೀನ ಮನೆಯ ಬಯಲು ಪ್ರದೇಶದಲ್ಲಿ ಸಪ್ತಮಾತೃಕೆಯರ ಸುಂದರವಾದ ಶಿಲ್ಪವಿದೆ. ಇದನ್ನು ರಕ್ಷಿಸಬೇಕಾದ ಅವಶ್ಯಕತೆ ಬಹಳಷ್ಟಿದೆ. ಅಲ್ಲದೆ ಪ್ರಾಚೀನತೆಯ ಕುರುಹು ಸಾರುವ ಬಿಳಿಮಣ್ಣು ಉಪಯೋಗಿಸಿ ಕಟ್ಟಲಾದ ನಾಲ್ಕು ಹೂಡೆಗಳಿವೆ. ಇವು ಸುಮಾರು ಮೂನ್ನೂರು ವರ್ಷಗಳಷ್ಟು ಹಳೆಯವು. ಇವುಗಳ ಎತ್ತರ ಸುಮಾರು 40 ಅಡಿಗಳು. ಈ ನಾಲ್ಕು ಹೂಡೆಗಳ ಮಧ್ಯ ಇದ್ದಿತೆಂದು ಹೇಳಲಾಗುವ ಕಟ್ಟಡದಲ್ಲಿ ನಿಜಾಮನ ಅಧಿಕಾರಿಗಳು ಇರುತ್ತಿದ್ದರಂತೆ. ಸುತ್ತಲಿನ ಗ್ರಾಮಗಳಲ್ಲಿ ವಸೂಲಿ ಮಾಡಲಾದ ಸುಂಕದ ಹಣವನ್ನು ಇಲ್ಲಿಯೆ ಸಂಗ್ರಹಿಸುತ್ತಿದ್ದರೆಂದು 80 ವಯಸ್ಸಿನ ಅಂಜಿರೆಡ್ಡಿ ಹೇಳಿದ್ದಾರೆ. ಆದರೆ ಇದೀಗ ನಾಲ್ಕು ಹೂಡೆಗಳ ಮಧ್ಯದಲ್ಲಿ ಇದ್ದಿತೆಂದು ಹೇಳಲಾಗುವ ಯಾವ ಕಟ್ಟಡಗಳ ಅವಶೇಷಗಳಿಲ್ಲ. ಇತ್ತೀಚೆಗೆ ಆ ಹೂಡೆಗಳ ಅಂತರದಲ್ಲಿ ಹಲವಾರು ಮನೆಗಳು ನಿರ್ಮಾಣಗೊಂಡಿವೆ. ಮೂಲಕಟ್ಟಡ ಎಂದೂ ನಾಶವಾಗಿರಬಹುದು.
ಅಪರೂಪದ ಅವಶೇಷಗಳನ್ನು ಹೊಂದಿರುವ ಬರೂರು ಗ್ರಾಮವು ಇತಿಹಾಸತಜ್ಞರ ಅವಜ್ಞೆಗೆ ಗುರಿಯಾಗಿದ್ದು, ಅಲ್ಲಿನ ಶಿಲ್ಪಗಳನ್ನು ಕಾಯ್ದಿಡಬೇಕಾದ ಅವಶ್ಯಕತೆಯಿದೆ. ಎಲ್ಲಮ್ಮದೇವಿ ಮಂದಿರದ ಬಲಭಾಗದಲ್ಲಿ ಕೆಲವು ಶಿಲ್ಪಗಳನ್ನು ಕಾಯ್ದಿಟ್ಟಂತೆ ಅಲ್ಲಲ್ಲಿ ಬಿದ್ದಿರುವ ಎಲ್ಲ ಶಿಲ್ಪಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ನಿಭಾಯಿಸಬೇಕಾಗಿದೆ.
***